ಚಾಂಡ್ಲರ್, ರೇಮಾಂಡ್ ಥಾರನ್‍ಟನ್

1888-1959. ಅಮೆರಿಕದ ಪತ್ತೇದಾರಿ ಕಾಂದಬರಿಕಾರ, ಷಿಕಾಗೊನಲ್ಲಿ ಹುಟ್ಟಿದ ಈತ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡಿದ. ಮೊದಲ ಮಹಾಯುದ್ಧದಲ್ಲಿ ಕೆನೆಡಿಯನ್ ಸೈನಿಕರೊಂದಿಗೆ ಹೋರಾಡಿ 1919ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ವಾಪಸ್ಸಾದ. ಅಲ್ಲಿ ಹಲವಾರು ವ್ಯವಹಾರಗಳಲ್ಲಿ ತೊಡಗಿ ಹಲವು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯತೊಡಗಿದ. ದಿ ಬಿಗ್ ಸ್ಲೀಪ್ (1939); ಫೇರ್‍ವೆಲ್, ಮೈ ಲವ್ಲೀ(1940) ಕಾದಂಬರಿಗಳು ಪ್ರಕಟಗೊಂಡ ಮೇಲೆ ಕ್ಲಿಷ್ಟ ಹಾಗೂ ಭಯಾನಕ ಪತ್ತೇದಾರಿ ಕಥೆಗಳ ಪ್ರವರ್ತಕನೆಂದು ಹೆಸರಾದ. ಅನಂತರ ದಿ ಹೈ ವಿಂಡೊ (1942), ದಿ ಲೇಡಿ ಇನ್ ದಿ ಲೇಕ್ (1943), ದಿ ಲಿಟ್ಲ್ ಸಿಸ್ಟರ್ (1949) ಪ್ರಕಟಗೊಂಡವು. ಈತನ ಎಲ್ಲ ಕಾಂದಬರಿಗಳಲ್ಲೂ ಫಿಲಿಪ್ ಮಾರ್ಲೊ ಎಂಬ ಖಾಸಗಿ ಪತ್ತೆದಾರ ಕಾಣಿಸಿಕೊಳ್ಳುತ್ತಾನೆ. ಈತನ ಕಥೆಗಳಲ್ಲಿ ದರೋಡೆ, ಸುಲಿಗೆ, ಕೊಲೆ ಮೊದಲಾದ ಅಪರಾಧಗಳೆಲ್ಲ ಬೃಹತ್ ಪ್ರಮಾಣದಲ್ಲಿ ನಡೆಯುತ್ತವೆ.

	ಹಲವಾರು ಚಲನಚಿತ್ರಗಳಿಗೆ ಚಾಂಡ್ಲರ್ ಸಂಭಾಷಣೆ ಒದಗಿಸಿದ್ದಾನೆ.				(ಕೆ.ವಿ.ಎಸ್.ಟಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ